ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಜಿಲ್ಲೆಯ ಪ್ರೌಢ ಶಾಲಾ ಶಿಕ್ಷಕರು ವೇತನವಿಲ್ಲದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಸವನ ಬಾಗೇವಾಡಿ, ನಿಡಗುಂದಿ, ಕೋಲಾರ ತಾಲೂಕಿನ ಪ್ರೌಢ ಶಾಲಾ ಶಿಕ್ಷಕರು ನಾಲೈದು ತಿಂಗಳಿನಿಂದ ಅನುದಾನದ ಕೊರತೆಯಿಂದಾಗಿ ವೇತನವಿಲ್ಲದೇ ಕರ್ತವ್ಯ ನಿರ್ವಹಿಸುವಂತಾಗಿದೆ. ಅದರಲ್ಲೂ ನಿಡಗುಂದಿ ತಾಲೂಕು ವ್ಯಾಪ್ತಿಗೆ ಒಳಪಡುವ ಉನ್ನತೀಕರಿಸಿದ ಸರ್ಕಾರಿ ಪ್ರೌಢ ಶಾಲೆ ಬೀರಲದಿನ್ನಿಯ ಶಿಕ್ಷಕರ ಪಾಡು ಹೇಳತೀರದಾಗಿದೆ. ಈ ಶಾಲೆಯಲ್ಲಿ ಒಟ್ಟು ಆರು ಜನ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದು, ಮೂರು ಜನ ಶಿಕ್ಷಕರ ವೇತನ ಹನ್ನೊಂದು ತಿಂಗಳಿನಿಂದ ಆಗಿರುವುದಿಲ್ಲ. ಉಳಿದ ಮೂರು ಜನ ಶಿಕ್ಷಕರ ವೇತನ ಆರು ತಿಂಗಳಿನಿಂದ ಆಗಿರುವುದಿಲ್ಲ. ಅತಿಯಾದ ಆರ್ಥಿಕ ಸಂಕಷ್ಟದಿಂದಾಗಿ ಬೀರಲದಿನ್ನಿ ಪ್ರೌಢ ಶಾಲೆಯ ಶಿಕ್ಷಕರ ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗಿದೆ.
ಅಖಂಡ ಬಸವನ ಬಾಗೇವಾಡಿ ತಾಲೂಕಿಗೆ ಒಳಪಡುವ ಕೋಲಾರ, ನಿಡಗುಂದಿ ಹಾಗೂ ಬಸವನ ಬಾಗೇವಡಿ ತಾಲೂಕಿನ ಪ್ರೌಢ ಶಾಲಾ ಶಿಕ್ಷಕರು ಕೂಡ ಅನುದಾನದ ಕೊರತೆಯಿಂದಗಿ ನಾಲೈದು ತಿಂಗಳಿನಿಂದ ವೇತನ ವಿಲ್ಲದೇ ಆರ್ಥಿಕ ಸಂಕಷ್ಟದಲ್ಲಿ ಜೀವನ ಸಾಗಿಸುವಂತಾಗಿದೆ. ಶನಿವಾರದ ಶಾಲಾ ಕರ್ತವ್ಯದ ಅವಧಿಯನ್ನು ಮುಗಿಸಿಕೊಂಡು ಮಧ್ಯಾಹ್ನ ಎರೆಡು ಗಂಟೆಗೆ ಮೂರೂ ತಾಲೂಕುಗಳ ಶಿಕ್ಷಕರು, ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಅವರ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ್ ಆವರಣದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿ ಆರ್ಥಿಕ ಇಲಾಖೆಯಿಂದ ಬರಬೇಕಾಗಿರುವ ಕೊರತೆ ಅನುದಾನವನ್ನು ಬಿಡುಗಡೆ ಗೊಳಿಸಿಕೊಡುವಂತೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಅರುಣ ಶಹಾಪುರ ಅವರು ಮಾತನಾಡಿ, ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆಯು ಶಿಕ್ಷಕರಿಗೆ ವೇತನ ನೀಡದೆ ಕಛೇರಿಗಳಿಗೆ ಅಲೆದಾಡಿಸುವುದು ಖಂಡನೀಯ. ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್, ಬಿಇಓ ಕಛೇರಿ ಮತ್ತು ಡಿಡಿಪಿಐ ಕಛೇರಿ ಇವುಗಳ ನಡುವೆ ಸಮನ್ವಯತೆಯ ಕೊರತೆಯಿಂದಗಿ ಶಿಕ್ಷಕರು ಪರದಾಡುತ್ತಿದ್ದಾರೆ. ಅದೇ ರೀತಿಯಾಗಿ ರಾಜ್ಯ ಮಟ್ಟದಲ್ಲಿ ಶಾಲಾ ಶಿಕ್ಷಣ ಮತ್ತು ಆರ್ಥಿಕ ಇಲಾಖೆಯ ನಡುವೆ ಸಮನ್ವಯತೆಯ ಕೊರತೆ ಎದ್ದು ಕಾಣುತ್ತಿದೆ. ಕುಂಟು ನೆಪ ಹೇಳದೇ ಆರ್ಥಿಕ ಇಲಾಖೆಯವರು ಕೊರತೆ ಅನುದಾನವನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೇ ರಾಜ್ಯ ಸರಕಾರದ ವಿರುದ್ಧ ವಿಧಾನಸೌಧದ ಮುಂದೆ ಬೊಬ್ಬೆ ಚಳುವಳಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪ್ರೌಢ ಶಾಲಾ ಶಿಕ್ಷಕರು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಗುರು ಕುಲಕರ್ಣಿ, ಕರ್ನಾಟಕ ರಾಜ್ಯ ಸಹ ಶಿಕ್ಷಕ ಸಂಘದ ಶರಣು ಕರನಾಳ,
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ ಶೇಡಶ್ಯಾಳ, ಜಿಲ್ಲಾ ಉಪಾಧ್ಯಕ್ಷ ಸಿದ್ದು ಹಂಚಿನಾಳ, ರಮೇಶ ಹಳ್ಳಿ, ಮಹಾಂತೇಶ ಝಳಕಿ, ಬಸವರಾಜ ಕೋಣಿನ, ಮಲ್ಲು ಸದಬ ಸೇರಿದಂತೆ ಅನೇಕರು ಉಪಸ್ಥಿತರಿದ್ದರು


