ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ನಗರದಲ್ಲಿ ಹಾಡಹಗಲೇ ಗುಂಡಿನ ದಾಳಿ ನಡೆಸಿ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ. ನಗರದ ಅಫ್ಜಲಪುರ ಟಕ್ಕೆ ನಿವಾಸಿ ಯಾಸೀನ್ ಹತ್ಯೆಯಾದ ವ್ಯಕ್ತಿಯಾಗಿದ್ದಾರೆ. ಪತ್ನಿಯೊಂದಿಗೆ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ದಾಳಿ ಮಾಡಿದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಯಾಸೀನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮೃತದೇಹವನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಂಧಿ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕುರಿತು ಮಾತನಾಡಿರುವ ಎಸ್ಪಿ ಲಕ್ಷ್ಮಣ ನಿಂಬರಗಿ ಅವರು ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ತನಿಖೆಗಾಗಿ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದೆ. ಆರೋಪಿಗಳು ಯಾರು ಅನ್ನೋದರ ಸ್ವಲ್ಪ ಮಾಹಿತಿಯಿದೆ. ಮೃತದೇಹ ಸ್ಕ್ಯಾನ್ ಬಳಿಕ ಗಾಯ ಎಷ್ಟು ಆಗಿರಬಹುದು, ಗುಂಡಿನ ಬಗ್ಗೆ ತಿಳಿದು ಬರಲಿದೆ. ಮೂರು ಸುತ್ತಿನ ಫೈರಿಂಗ್ ಎಂದು ಹೇಳಲಾಗುತ್ತಿದೆ. ಯಾವ ಕಾರಣಕ್ಕೆ ಈ ರೀತಿ ಮಾಡಲಾಗಿದೆ. ಇವರಿಗೂ ಅವರಿಗೂ ಏನು ಸಂಬಂಧ ಅನ್ನೋದರ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.


