LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಂವಿಧಾನದ ಮೂಲ ಆಶಯವೇ ಎಲ್ಲರನ್ನು ಒಳಗೊಳ್ಳುವ ಸಂಸ್ಕೃತಿ: ರಂಜಾನ್ ದರ್ಗಾ

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಭಾರತದ ಸಂವಿಧಾನದ ಮೂಲ ಆಶಯವೇ ಎಲ್ಲರನ್ನು ಒಳಗೊಳ್ಳುವ ಸಂಸ್ಕೃತಿಯಾಗಿದೆ. ಸಮಾಜದ ಪ್ರತಿಯೊಬ್ಬರಿಗೂ ಸಮಾನ ಅವಕಾಶ, ಗೌರವ ಮತ್ತು ನ್ಯಾಯ ದೊರೆಯಬೇಕು ಎಂಬ ಉದಾತ್ತ ಪರಿಕಲ್ಪನೆಯನ್ನು ಸಂವಿಧಾನ ಹೊಂದಿದೆ. ನಮ್ಮ ಜೀವನದ ಪ್ರತಿಯೊಂದು ಉಸಿರಿನಲ್ಲಿಯೂ ಸಂವಿಧಾನದ ಆಶಯಗಳು ಅಡಕವಾಗಿವೆ. ಸಂವಿಧಾನವು ಕೇವಲ ಆಡಳಿತಾತ್ಮಕ ದಾಖಲೆಯಲ್ಲ, ಅದು ಇಡೀ ಬದುಕಿನ ಮಾರ್ಗದರ್ಶಿ ಹಾಗೂ ಪ್ರಜಾಪ್ರಭುತ್ವದ ಸೌಂದರ್ಯವಾಗಿದೆ ಎಂದು ಸಾಹಿತಿ ರಂಜಾನ್ ದರ್ಗಾ ಅವರು ಹೇಳಿದರು.

ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಬಸವಣ್ಣನವರ ವಚನಗಳು ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಪ್ರತೀಕವಾಗಿವೆ. ಬಡವರು, ಮಹಿಳೆಯರು ಸೇರಿದಂತೆ ಸಮಾಜದ ಎಲ್ಲ ವರ್ಗದ ಜನರಿಗೂ ಸಮಾನತೆ ದೊರೆಯಬೇಕು ಎಂಬ ಕನಸನ್ನು ಬಸವಾದಿ ಶರಣರು ಕಂಡಿದ್ದರು. ಅವರ ವಿಚಾರಧಾರೆಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. ಸಮಾಜದ ಪ್ರತಿಯೊಬ್ಬರೂ ಯಾವುದೇ ತಾರತಮ್ಯವಿಲ್ಲದೆ ಸಮಾನ ಅವಕಾಶ ಮತ್ತು ಗೌರವದಿಂದ ಬದುಕುವ ವಾತಾವರಣವನ್ನು ಸಂವಿಧಾನ ಕಲ್ಪಿಸಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಾಕಾರಗೊಳಿಸುವ ಶಕ್ತಿ ಸಂವಿಧಾನಕ್ಕಿದ್ದು, ಪ್ರತಿಯೊಬ್ಬರೂ ಅದರ ಮಹತ್ವವನ್ನು ಅರಿತು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಡೆದುಕೊಳ್ಳುವುದು ಅಗತ್ಯ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ವಿಠ್ಠಲ ಕಟಕಧೊಂಡ ಅವರು, ಭಾರತೀಯ ಸಂವಿಧಾನವು ದೇಶಪ್ರೇಮ, ಲಿಂಗಭೇದವಿಲ್ಲದ ಸಮಾನತೆ, ಸ್ವಾತಂತ್ರ‍್ಯ ಹಾಗೂ ಭ್ರಾತೃತ್ವದ ಮೌಲ್ಯಗಳನ್ನು ಒಳಗೊಂಡಿರುವ ವಿಶಿಷ್ಟ ದಾಖಲೆಯಾಗಿದ್ದು, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ಭದ್ರ ತಳಹದಿಯಾಗಿದೆ. ಸಂವಿಧಾನದ ಮೂಲಕ ಪ್ರತಿಯೊಬ್ಬ ನಾಗರಿಕರಿಗೂ ಸಮಾನ ಹಕ್ಕು ಮತ್ತು ಗೌರವಯುತ ಬದುಕಿನ ಅವಕಾಶ ಕಲ್ಪಿಸಿದ ಡಾ.ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಅನನ್ಯವಾಗಿದೆ ಎಂದರು.

ಜಿಲ್ಲಾಧಿಕಾರಿ ಡಾ. ಆನಂದ.ಕೆ ಅವರು ಮಾತನಾಡಿ, ಸಂವಿಧಾನವು ಕೇವಲ ಒಂದು ಪುಸ್ತಕ ಅಥವಾ ನಿಯಮಾವಳಿಯಲ್ಲ. ಅದೊಂದು ಜೀವಂತ ದಾಖಲೆಯಾಗಿದ್ದು, ದೇಶದ ಸರ್ವೋಚ್ಚ ಕಾನೂನಾಗಿದೆ. ದೇಶದ ಆಡಳಿತ ವ್ಯವಸ್ಥೆ, ಕಾನೂನು ರಚನೆ ಹಾಗೂ ಪ್ರಜಾಪ್ರಭುತ್ವದ ಕಾರ್ಯನಿರ್ವಹಣೆಗೆ ಸಂವಿಧಾನವೇ ಮೂಲ ಆಧಾರವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಾಲಿಕೆ ಮೇಯರ್ ಮಡಿವಾಳಪ್ಪ ಕರಡಿ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಂಗಾಧರ ಸಂಬಣ್ಣಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ ಪ್ರಕಾಶ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ವಿಜಯಪುರ ಉಪವಿಭಾಗಾಧಿಕಾರಿ ಜುಫಿಶಾನ್ ಹಕ್, ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಜಿಲ್ಲಾ ಶಸ್ತ್ರಚಿಕಿತ್ಸಕ ಶಿವಾನಂದ ಮಾಸ್ತಿಹೋಳಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲಿನಾಥ ಕುಸುನಾಳ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೂವಿ, ಜೆ.ಎಸ್.ಪಾಟೀಲ, ಪೀರಪ್ಪ ನಡುವಿನಮನಿ, ಸಿದ್ದು ರಾಯಣ್ಣವರ, ಭೀಮರಾಯ ಜಿಗಜಿಣಗಿ, ಸೋಮು ಕಲ್ಲೂರ, ರಮೇಶ ಅಸಂಗಿ, ಅಹ್ಮದ್ ಪಟೇಲ್ ಭಾಗವಾನ, ರವೀಂದ್ರ ಬಂಥನಾಳ, ರವೀಂದ್ರ ಜಾಧವ, ದಿಲೀಪ ಪ್ರಭಾಕರ, ನಡಗೇರಿ, ಶರಣು ಸಿಂಧೆ, ಅಶೋಕ ಚಲವಾದಿ, ವಿನಾಯಕ ಗುಣಸಾಗರ, ವಿದ್ಯಾವತಿ ಅಂಕಲಗಿ, ರಾವುತ ತಳಕೇರಿ, ಅವಿನಾಶ ಬಾಣಿಕೋಲ, ಮಳಸಿದ್ದ ನಾಯ್ಕೋಡಿ, ಬಂಡಿವಡ್ಡರ, ಶ್ರೀನಿವಾಸ ಶಹಾಪುರ, ಕೆ.ವಿ. ಕೋರೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವಸತಿ ಶಾಲೆಗಳ ಪ್ರಾಂಶುಪಾಲರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಶಿವಾನಂದ ಬಡಿಗೇರ ನಿರೂಪಿಸಿದರು.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST