LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿಜಯಪುರ ವಿಮಾನ ನಿಲ್ದಾಣ ಕಾರ್ಯಾರಂಭಕ್ಕೆ ಮುಹೂರ್ತ

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಬಹುನಿರೀಕ್ಷಿತ ವಿಜಯಪುರ ವಿಮಾನ ನಿಲ್ದಾಣ ಕಾರ್ಯಾರಂಭಕ್ಕೆ ಮುಹೂರ್ತ ಕೂಡಿ ಬಂದಿದ್ದು, 2027ರ ವರ್ಷಾರಂಭವಾಗುತ್ತಿದ್ದಂತೆಯೇ ವಿಮಾನ ಹಾರಿಸುವ ಪ್ರಯತ್ನ ಕೈಗೂಡಲಿದೆ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ (ಕೆಎಸ್‌ಐಐಡಿಸಿ) ಅಧ್ಯಕ್ಷರಾದ ಎಸ್.ಜಿ. ನಂಜಯ್ಯನಮಠ ತಿಳಿಸಿದರು. ಶುಕ್ರವಾರ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲಿಸಿದ ಬಳಿಕ ಅವರು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪರಿಸರ ಇಲಾಖೆಯ ಅನುಮತಿ ಇಲ್ಲದೇ ಇರುವುದರಿಂದ ಹಾಗೂ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದಾಗಿ ವಿಳಂಬವಾಗಿದೆ. ನಂತರದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ.ಪಾಟೀಲರು ಈ ನಿಟ್ಟಿನಲ್ಲಿ  ಸಾಕಷ್ಟು ಪ್ರಯತ್ನಿಸಿದ್ದರಿಂದ ಇದೀಗ ಮೂರು ವಾರಗಳ ಹಿಂದೆ ತಡೆಯಾಜ್ಞೆ ತೆರವಾಗಿದೆ ಎಂದರು.

ಕೇಂದ್ರ ಪರಿಸರ ಇಲಾಖೆ ಅನುಮತಿ ಕೋರಿದ್ದೇವೆ. ಸಂಸತ್ ಅಧಿವೇಶನ ನಡೆಯುತ್ತಿರುವುದರಿಂದ ತಡವಾಗಬಹುದು. ಆದರೆ ಶೀಘ್ರದಲ್ಲೇ ಅನುಮತಿ ಸಿಗಲಿದೆ ಎಂದು ನಂಜಯ್ಯನಮಠ ವಿಶ್ವಾಸ ವ್ಯಕ್ತಪಡಿಸಿದರು. ರಾತ್ರಿ ವಿಮಾನ ಹಾರಾಟಕ್ಕೆ ವ್ಯವಸ್ಥೆ ಮಾಡುವ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನೊಂದು ವಾರದಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣವಾಗಲಿದೆ. ನೈಟ್ ಲ್ಯಾಂಡಿಂಗ್ ಗಾಗಿ ಭೂಸ್ವಾಧೀನ ಕಾರ್ಯ ಪ್ರಗತಿಯಲ್ಲಿದೆ. ಜನವರಿ ತಿಂಗಳೊಳಗಾಗಿ ವಿಮಾನಯಾನ ಆರಂಭಿಸುವ ಪ್ರಯತ್ನ ಸಫಲವಾಗಲಿದೆ ಎಂದರು. ತಾಂತ್ರಿಕ ವಿಭಾಗ ಹಾಗೂ ರಾಷ್ಟ್ರೀಯ ವಿಮಾನಯಾನ ಇಲಾಖೆಯಿಂದ ಅಂತಿಮ ಅನುಮೋದನೆ ದೊರಕಿದ ಮೇಲೆ ವಿಮಾನ ಹಾರಾಟ ಆರಂಭವಾಗಲಿದೆ.

ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಶ್ರಮದಿಂದ ಹೊಸ ವರ್ಷದಲ್ಲಿ ವಿಮಾನಯಾನ ಆರಂಭವಾಗಲಿದೆ. ವಿಜಯಪುರ ವಿಮಾನ ನಿಲ್ದಾಣವನ್ನು ಏರ್ ಬಸ್-320 ವಿಮಾನಗಳ ಹಾರಾಟಕ್ಕಾಗಿ ಒಟ್ಟು  618.75 ಕೋಟಿ ರೂಪಾಯಿ ಮೊತ್ತಕ್ಕೆ ಮಂಜೂರಾಗಿತ್ತು. ಈ ಕಾಮಗಾರಿಗಾಗಿ ಕರ್ನಾಟಕ ಸರ್ಕಾರದ ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಯಿಂದ ಅನುದಾನ ಭರಿಸಲಾಗುತ್ತಿದೆ. ಈ ಕಾಮಗಾರಿಯ ಮೇಲ್ವಿಚಾರಣೆಗಾಗಿ ಬೆಂಗಳೂರಿನ ಕೆ.ಎಸ್.ಐ.ಐ.ಡಿ.ಸಿ ಸಂಸ್ಥೆಯನ್ನು ನೋಡಲ್ ಏಜೆನ್ಸಿಯಾಗಿ ನೇಮಕ ಮಾಡಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕಾಧಿಕಾರಿ ಸಿ.ಎಸ್.ಪೊಲೀಸ್ ಪಾಟೀಲ, ಸಹಾಯಕ ಎಂಜಿನೀಯರ್ ಆರ್.ಎನ್. ಮಸಳಿ, ವಿಮಾನ ನಿಲ್ದಾಣದ ನಿರ್ದೇಶಕ ಪಿ.ಸಿ. ಪೊನ್ನಪ್ಪ ಹಾಗೂ ಚಂದ್ರಶೇಖರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST