ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಪ್ರೀತಿ, ಪ್ರೇಮದ ವಿಚಾರಗಳು ಕೆಲವೊಮ್ಮೆ ಎಷ್ಟೊಂದು ಕ್ರೌರ್ಯಕ್ಕೆ ತಿರುಗುತ್ತೆ ಅನ್ನೋದು ಆಗಾಗ ನಡೆಯುವ ಘಟನೆಗಳು ಸಾಕ್ಷಿ ಆಗುತ್ತಿವೆ. ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಇದೀಗ ಇಂತಹದ್ದೆ ಒಂದು ಘಟನೆ ನಡೆದಿದೆ. ಹುಡುಗಿ ತನ್ನ ಹುಡುಗನಿಗೆ ಬೆಂಕಿ ಹಚ್ಚಿ ಸಜೀವವಾಗಿ ಸುಟ್ಟು ಹಾಕಿದ್ದಾಳೆ. ಆಕೆಯ ಮಾತು ನಂಬಿ ಮನೆಗೆ ಬಂದ ಹುಡುಗ ಸುಟ್ಟು ಬೂದಿಯಾಗಿದ್ದಾನೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂತಹದೊಂದು ಘಟನೆ ನಡೆದಿದೆ.
ಕಿರಣ್ ಕೊಲೆಯಾದ ಯುವಕ. ಪ್ರೇಮಾ ಕೊಲೆ ಮಾಡಿದ ಯುವತಿಯಾಗಿದ್ದಾಳೆ. ಕಿರಣ್ ನನ್ನು ಮನೆಗೆ ಕರೆಯಿಸಿಕೊಂಡ ಯುವತಿ, ವಿದೇಶಿ ಶೈಲಿಯಲ್ಲಿ ಪ್ರೀತಿಯ ನಿವೇದನೆ ಮಾಡುತ್ತೇನೆ ಎಂದು ಹೇಳಿ ಆತನ ಕೈ ಕಾಲುಗಳನ್ನು ಮಂಚಕ್ಕೆ ಕಟ್ಟಿದ್ದಾಳೆ. ಇದನ್ನು ನಂಬಿದ ಕಿರಣ್ ಸುಮ್ಮನಿದ್ದಾನೆ. ಪ್ರೇಮಾ ಪ್ಲಾನ್ ಮಾಡಿದಂತೆ ಅವನನ್ನು ಮಂಚಕ್ಕೆ ಕಟ್ಟಿ ಸೀಮೆಎಣ್ಣೆ ಸುರಿದ ಬೆಂಕಿ ಹಚ್ಚಿದ್ದಾಳೆ. ಕಿರಣ್ ಸಜೀವ ದಹನವಾಗಿದ್ದಾನೆ.
ಇವರಿಬ್ಬರು ಒಂದೇ ಕಡೆ ಕೆಲಸ ಮಾಡುತ್ತಿದ್ದರಂತೆ. ಕಳೆದ ಫೆಬ್ರವರಿ 14ರಂದು ತನ್ನ ಪ್ರೀತಿಯ ವಿಚಾರವನ್ನು ಕಿರಣ್ ಗೆ ಹೇಳಿದ್ದಾಳೆ. ಇವನು ಸಹ ಒಪ್ಪಿಕೊಂಡಿದ್ದಾನೆ. ಇತ್ತೀಚೆಗೆ ಕಿರಣ್ ತನ್ನ ಹಳೆಯ ಹುಡುಗಿಯ ಜೊತೆಗೆ ಸಂಪರ್ಕದಲ್ಲಿದ್ದನಂತೆ. ಆಕೆಯ ಹುಟ್ಟು ಹಬ್ಬವನ್ನು ಆಚರಿಸಿ ಫೋಟೋಗಳನ್ನು ತೆಗೆಸಿಕೊಂಡಿದ್ದಾನಂತೆ. ಅಲ್ಲದೆ ಪ್ರೇಮಾಳಿಂದ ಅಂತರ ಕಾಯ್ದುಕೊಳ್ಳುತ್ತಿದ್ದನಂತೆ. ಈ ಕಾರಣಕ್ಕೆ ಸಿಟ್ಟಾದ ಯುವತಿ ಅವನನ್ನು ಕೊಲೆ ಮಾಡಿ ಸ್ಕೆಚ್ ಹಾಕಿದ್ದಾಳೆ. ಅದರಂತೆ ಮನೆಯಲ್ಲಿ ಯಾರು ಇಲ್ಲದ ವೇಳೆ ಅವನನ್ನು ಮನೆಗೆ ಕರೆಯಿಸಿಕೊಂಡು ಬೆಂಕಿ ಹಚ್ಚಿ ಹತ್ಯೆ ಮಾಡಿದ್ದಾಳೆ. ಯುವತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.




