ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ರಾಜ್ಯ ಸರ್ಕಾರ 101 ತಾಲೂಕುಗಳನ್ನು ಬರಗಾಲ ಪೀಡಿತ ಎಂದು ಗುರುವಾರ ಘೋಷಣೆ ಮಾಡಿದೆ. ಇದರಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿ, ಆಲಮೇಲ ತಾಲೂಕುಗಳನ್ನು ಕೈ ಬಿಡಲಾಗಿರುವುದನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಸಿಂದಗಿ ತಾಲೂಕು ಘಟಕ ಖಂಡಿಸಿದೆ. ಶುಕ್ರವಾರ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಈ ಕುರಿತು ಮನವಿ ಸಲ್ಲಿಸಲಾಗಿದೆ.
ಈ ವೇಳೆ ಮಾತನಾಡಿದ ತಾಲೂಕಾಧ್ಯಕ್ಷ ಬಸವರಾಜ ರಂಜುಣಗಿ, ಸಿಂದಗಿ, ಆಲಮೇಲ, ದೇವರ ಹಿಪ್ಪರಗಿ ತಾಲೂಕುಗಳನ್ನು ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಕೈ ಬಿಟ್ಟಿರುವುದು ತುಂಬಾ ಬೇಸರವಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಮತ್ತೊಮ್ಮೆ ಸಮೀಕ್ಷೆ ಮಾಡಿಸುವ ಮೂಲಕ ಬರಗಾಲ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಸೇರಿಸಿ ರೈತರಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು. ಶಿರಸ್ತೇದಾರ್ ಇಂದರಾಬಾಯಿ ಬಳಗಾನೂರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರಮುಖ ಬೇಡಿಕೆಗಳು: ಸಿಂದಗಿ, ಆಲಮೇಲ ಹಾಗೂ ದೇವರ ಹಿಪ್ಪರಗಿ ತಾಲೂಕುಗಳನ್ನು ಬರಗಾಲ ಪೀಡತ ತಾಲೂಕುಗಳ ಪಟ್ಟಿಗೆ ಸೇರಿಸಬೇಕು. ಬರಗಾಲದಿಂದ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ. ಬೆಳೆ ಹಾನಿಯ ವಾಸ್ತವಿಕ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು. ರೈತರ ಕೃಷಿ ಸಾಲ, ವಿದ್ಯುತ್ ಹಾಗೂ ಇತರೆ ಸಮಸ್ಯೆಗಳ ಕುರಿತು ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬರ ಪರಿಸ್ಥಿತಿಯ ವಾಸ್ತವಿಕೆತೆಯನ್ನು ಪರಿಶೀಲಸಬೇಕು. ವಿಮೆ ಕಟ್ಟದೆ ಇರುವ ರೈತರಿಗೂ ಪರಿಹಾರ ನೀಡಬೇಕು.
ಈ ವೇಳೆ ಏಕನಾಥ ದ್ವಾಶ್ಯಾಳ, ಮಕೇಶ ಬಡಿಗೇರ, ಶ್ರೀಕಾಂತ ದೇವೂರ, ಶರಣಬಸು ಶಂಬೇವಾಡ, ಪೀರಪ್ಪ ಬಡಗೇರ, ಚಂದ್ರಶೇಖರ ದೇವೂರ, ಪರಶುರಾಮ ದೊಡಮನಿ, ಶಾಂತಪ್ಪ ಕೋರವಾರ, ಮಲಕಪ್ಪ ಅಲ್ಲಾಪೂರ, ಆಕಾಶ ಪಾತ್ರೋಟ್ಟಿ, ಶರಣಯ್ಯ ನಂದಿಕೋಲ ಸೇರಿದಂತೆ ಇತರರು ಉಪಸ್ಥಿತರಿದ್ದರು.



