ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ವಿವಾದಿತ ಜಮೀನು ಖರೀದಿಸಲು ಮುಂದಾಗಿದ್ದ ತಂದೆ, ಮಗನ ಕೊಲೆಯಾದ ಘಟನೆ ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ತಡಲಗಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಕಲ್ಲು, ಕಟ್ಟಿಗೆಯಿಂದ ಹೊಡೆದು ಹತ್ಯೆ ಮಾಡಲಾಗಿದೆ. 65 ವರ್ಷದ ಹನುಮಂತ ಸಾಲವಾಡಗಿ ಹಾಗೂ ಇವರ ಮಗ 38 ವರ್ಷದ ಮಂಜುನಾಥ ಸಾಲವಾಡಗಿ ಕೊಲೆಯಾದ ದುರ್ದೈವಿಗಳು.
ತಡಲಗಿ ಗ್ರಾಮದ ಹನುಮವ್ವ ಮೇಟಿ ಎಂಬುವರ 8 ಎಕರೆ ಜಮೀನನ್ನು ಹನುಮಂತ ಸಾಲವಾಡಗಿ ಅವರು ಕಳೆದ 3 ವರ್ಷಗಳಿಂದ ಲೀಸ್ ಮೇಲೆ ಕೃಷಿ ಮಾಡುತ್ತಿದ್ದರಂತೆ. ಇದರ ನಡುವೆ ಸಾಲವಾಡಗಿಯವರಿಗೆ ಹನುಮವ್ವ ಜಮೀನು ಮಾರಲು ಮುಂದಾಗಿದ್ದರಂತೆ. ಇದಕ್ಕೆ ಆಕೆಯ ಸಂಬಂಧಿಕರಾದ ರಾಮಪ್ಪ ಮೇಟಿ, ಗಿರಿಯಪ್ಪ ಮೇಟಿ ಹಾಗೂ ಹನುಮಂತ ಮೇಟಿ ಎಂಬುವರು ತಕಾರರು ತೆಗೆದಿದ್ದರಂತೆ. ಜಮೀನು ಮಾರಾಟ ಮಾಡಬಾರದು. ಅದರಲ್ಲಿ ನಮಗೂ ಪಾಲಿದೆ ಎಂದು ಗಲಾಟೆ ಮಾಡಿದ್ದರಂತೆ. ಹೀಗಾಗಿ ಇದು ವಿವಾದದಲ್ಲಿತ್ತು.
ಶುಕ್ರವಾರ ಸಾಲವಾಡಗಿ ಕುಟುಂಬಸ್ಥರು ಕೂಲಿಕಾರರೊಂದಿಗೆ ಕಬ್ಬು ಕಟಾವು ಮಾಡಲು ಹೋದಾಗ ಗಿರಿಯಪ್ಪ ಮೇಟಿ ಕಡೆಯವರು ಜಗಳ ತೆಗೆದಿದ್ದಾರೆ. ಕಬ್ಬು ಕಟಾವು ಮಾಡುವುದನ್ನು ತಡೆದಾಗ ಎರಡು ಕಡೆ ಜಗಳವಾಗಿದೆ. ಆಗ ಗಿರಿಯಪ್ಪ ಮೇಟಿ ಸೇರಿ 12 ಆರೋಪಿಗಳು ಕಲ್ಲು, ಕಟ್ಟಿಗೆಯಿಂದ ದಾಳಿ ಮಾಡಿ ಕೊಲೆ ಮಾಡಿದ್ದಾರೆ. ಆರೋಪಿಗಳಾದ ಗಿರಿಯಪ್ಪ ಮೇಟಿ, ರಾಮಪ್ಪ ಮೇಟಿ, ಹನುಮಂತ ಮೇಟಿ, ಕೆಂಚಪ್ಪ ಸೇರಿ ಐವರನ್ನು ಬಂಧಿಸಲಾಗಿದೆ. ಉಳಿದವರ ಬಂಧನ ಶೀಘ್ರದಲ್ಲಿ ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.


