ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಡಿ.ಕೆ.ಶಿವಕುಮಾರ ಅವರು ಮುಖ್ಯಮಂತ್ರಿಯಾದ ಬಳಿಕ ನಡೆಸಿದ ಮೊದಲ ಸಚಿವ ಸಂಪುಟದಲ್ಲಿ ಜನಸೇವೆ ಅನ್ನೋ ಇಲಾಖೆಯನ್ನು ಜಾರಿಗೆ ತಂದಿದ್ದಾರೆ. ಈ ಮೂಲಕ ಸಚಿವರು, ಶಾಸಕರು ಮೊದಲ ಹಾಗೂ ಮೂರನೇ ಶನಿವಾರ ಹೋಬಳಿ, ಪಂಚಾಯ್ತಿ, ಜಿಲ್ಲಾ ಮಟ್ಟದಲ್ಲಿ ಜನರ ಸಮಸ್ಯೆಗಳನ್ನು ಕೇಳಬೇಕು. ಅದನ್ನು ಸರ್ಕಾರಕ್ಕೆ ಮುಟ್ಟಿಸಬೇಕು ಅನ್ನೋ ಯೋಜನೆಯನ್ನು ಜಾರಿಗೆ ತರಲಾಗಿದೆ. ‘ಬಾಗಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ’ ಅನ್ನೋ ವಿಚಾರಧಾರ ಇಟ್ಟುಕೊಳ್ಳಲಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಅವರು ಹೇಳಿದರು.
ಗುರುವಾರ ತಾಲೂಕು ಆಡಳಿತ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಸೆಪ್ಟೆಂಬರ್ 5ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಪ್ರಜಾಸೇವೆಗೆ ಚಾಲನೆ ನೀಡಿದ್ದಾರೆ. 2 ಹಾಗೂ 4ನೇ ಶಾನಿವಾರ ಶಾಸಕರ ಅಧ್ಯಕ್ಷತೆಯಲ್ಲಿ ತಾಲೂಕಿನ ಎಲ್ಲ ಅಧಿಕಾರಿಗಳನ್ನೊಳಗೊಂಡು ಹೋಬಳಿ ಮಟ್ಟದಲ್ಲಿ ಭೇಟಿ ಕೊಟ್ಟು ಜನರ ಅಹವಾಲು ಕೇಳುವುದು. ವಿಧವಾ ವೇತನ, ಅಂಗವಿಕಲರ ಮಾಶಾಸನ, ಸಂಧ್ಯಾಸುರಕ್ಷಾ, ಪಿಂಚಣಿ, ಪಹಣಿ ತಿದ್ದುಪಡಿ, ಪೋಡಿ, ಖಾತೆ ಬದಲಾವಣೆ, ಶಕ್ತಿ ಯೋಜನೆ, ವಸತಿ ಯೋಜನೆ, ನಿವೇಶನ ಹಂಚಿಕೆ, ಹೊಸ ಪಡಿತರ ಚೀಟಿ, ರಸ್ತೆ, ಅಭಿವೃದ್ಧಿ, ಕುಡಿಯುವ ನೀರು, ಅನ್ಯಭಾಗ್ಯ, ಗೃಹಲಕ್ಷ್ಮಿ, ಸರ್ಕಾರಿ ಶಾಲೆ, ಅಂಗನವಾಡಿಗಳ ಅಭಿವೃದ್ಧಿ, ನರೇಗಾ, ಕೆರೆ ತುಂಬಿಸುವ ಹಾಗೂ ಬೃಹತ್ ನೀರಾವರಿ, ದೇವಸ್ಥಾನ ಅಭಿವೃದ್ಧಿ ಹಾಗೂ ಜೀರ್ಣೋದ್ಧಾರ, ಯುನಿಧಿ, ಗೃಹಜ್ಯೋತಿ ಸೇರಿದಂತೆ ಹಲವು ಅಹವಾಲುಗಳನ್ನು ಕೇಳಲಾಗುವುದು.
‘ವಿಜಯಪುರ ಜಿಲ್ಲೆಯಲ್ಲಿ 6 ತಾಲೂಕುಗಳನ್ನು ಬರಗಾಲಪೀಡಿತ ಎಂದು ಘೋಷಿಸಲಾಗಿದೆ. ಆದರೆ, ಸಿಂದಗಿ, ಆಲಮೇಲ ಘೋಷಣೆ ಮಾಡಿಲ್ಲ. ಮುಖ್ಯಮಂತ್ರಿ, ಕಂದಾಯ ಸಚಿವರನ್ನು ಭೇಟಿಯಾಗಿ ಎರಡು ತಾಲೂಕುಗಳನ್ನು ಬರಗಾಲಪೀಡತ ಎಂದು ಘೋಷಿಸಬೇಕು ಎಂದು ಮನವಿ ಮಾಡಿದ್ದೇನೆ. 3ನೇ ಪಟ್ಟಿಯಲ್ಲಿ ಸಿಂದಗಿ, ಆಲಮೇಲ ಬರಗಾಲಪೀಡಿತ ಎಂದು ಘೋಷಣೆ ಮಾಡುವ ಸಾಧ್ಯತೆಯಿದೆ.’ - ಅಶೋಕ ಮನಗೂಳಿ, ಶಾಸಕರು
ಈಗಾಗ್ಲೇ ಅರ್ಜಿಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಸೆಪ್ಟೆಂಬರ್ 12ರಂದು ಯರಗಲ್ಲ ಬಿ.ಕೆ ಗ್ರಾಮದಿಂದ ಪ್ರಜಾಸೇವೆ ಪ್ರಾರಂಭಿಸುತ್ತಿದ್ದೇವೆ. ಯರಗಲ್ಲ ಕೆ.ಡಿ, ಬಂಕಲಗಿ, ಬ್ಯಾಲ್ಯಾಳ, ಗುತ್ತರಗಿ, ಗಬಸಾವಳಗಿ, ಆಹೇರಿ, ಬಿಸನಾಳ, ಕೆರೂರ, ಹಂಚನಾಳ, ಬಂಟನೂರ, ಸುಂಗಠಾಣ, ಮುರುಡಿ, ನಂದಗಿರಿ, ಗೊರಗುಂಡಗಿ, ನಾಗಾವಿ ಕೆ.ಡಿ, ನಾಗಾವಿ ಬಿ.ಕೆ ಹೀಗೆ 18 ಹಳ್ಳಿಗಳ ಜನರ ಆಹವಾಲುಗಳನ್ನು ಸ್ವೀಕಾರ ಮಾಡಿ, ಸೂಕ್ತವಾದ ಪರಿಹಾರ ಕಂಡುಕೊಳ್ಳಲಾಗುವುದು. ಸ್ಥಳದಲ್ಲಿಯೇ ಕೆಲವೊಂದು ನಿವಾರಿಸಬಹುದು.
ಸೆಪ್ಟೆಂಬರ್ 19ರಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ.ಪಾಟೀಲ ಅವರು ಸಿಂದಗಿ ನಗರದಲ್ಲಿ ನಡೆಯಲಿರುವ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಅಂದು ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯ್ತಿ ಸಿಇಒ ಸೇರಿದಂತೆ ಜಿಲ್ಲೆಯ ಎಲ್ಲ ಅಧಿಕಾರಿಗಳು ಭಾಗವಹಿಸುತ್ತಾರೆ. ಸಿಂದಗಿ ತಾಲೂಕಿನ 59 ಹಳ್ಳಿಗಳ ಜನರು ಅರ್ಜಿ ಸಲ್ಲಿಸಬಹುದು. ಆಲಮೇಲ ತಾಲೂಕಿಗೆ ಮತ್ತೊಂದು ಶನಿವಾರ ಕಾರ್ಯಕ್ರಮ ಆಯೋಜನೆ ಮಾಡುತ್ತೇವೆ. ಸೆಪ್ಟೆಂಬರ್ 26ರಂದು ಆಲಮೇಲ ತಾಲೂಕಿನ ಮಲಘಾಣ ಗ್ರಾಮದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಪ್ರಜಾಸೇವೆ ನಡೆಯಲಿದೆ. ಈ ಯೋಜನೆ ಉಪಯೋಗವನ್ನು ಸಾರ್ವಜನಿಕರು ಪಡೆಯಬೇಕು ಎಂದು ಹೇಳಿದರು. ಈ ವೇಳೆ ಸಿಂದಗಿ ತಹಶೀಲ್ದಾರ್ ಕರೆಪ್ಪ ಬೆಳ್ಳಿ, ತಾಲೂಕು ಪಂಚಾಯ್ತಿ ಇಒ ಅನಿಲ ಹಳ್ಳಿ, ಆಲಮೇಲ ತಹಶೀಲ್ದಾರ್ ಸೇರಿ ಇತರೆ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


