ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಸಿಂದಗಿಯಲ್ಲಿ ನಡೆಯಲಿರುವ 21 ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿದ್ವಾಂಸರಿಂದ ಗೋಷ್ಠಿಗಳನ್ನು ಏರ್ಪಡಿಸಿ ಸಮ್ಮೇಳನಕ್ಕೆ ಬಂದ ಕನ್ನಡ ಅಭಿಮಾನಿಗಳಿಗೆ ಜ್ಞಾನ ದಾಸೋಹ ಉಣ ಬಡಿಸುವಂತಾಗಲಿ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಮಕ್ಕಳ ಸಾಹಿತಿ ಹ.ಮ.ಪೂಜಾರ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕ ಪಂಚಾಯತ ಕಾರ್ಯಾಲಯದಲ್ಲಿ ನಡೆದ ಸಾಹಿತಿಗಳ, ಲೇಖಕರ, ಕವಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 14 ವರ್ಷದ ಹಿಂದೆ ಸಿಂದಗಿಯಲ್ಲಿ ಜಿಲ್ಲಾ ಸಮ್ಮೇಳನ ಜರುಗಿತ್ತು. ಈಗ ಹಮ್ಮಿಕೊಳ್ಳಲಾಗಿರುವ ಸಮ್ಮೇಳನಕ್ಕೆ ಸಿಂದಗಿ ತಾಲೂಕಿನ ಎಲ್ಲ ಕನ್ನಡ ಅಭಿಮಾನಿಗಳು ತನು, ಮನ, ದನದಿಂದ ಸಹಕಾರ ನೀಡುವುದು ಅತ್ಯಗತ್ಯ ಎಂದರು.
ಎಚ್.ಜಿ.ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಮಾತನಾಡಿ, ಮಕ್ಕಳಗೋಷ್ಠಿಗೆ ಅವಕಾಶ ನೀಡಿದರೆ ಒಳ್ಳೆಯದಾಗುತ್ತೆ. ಸ್ಥಳಿಯ ವ್ಯಾಪಾರಸ್ಥರು ಹಾಗೂ ದಾನಿಗಳನ್ನು ಗುರುತಿಸಿ ಅವರಿಗೂ ಜವಾಬ್ದಾರಿ ನೀಡಬೇಕು ಎಂದರು. ನಿವೃತ್ತ ಶಿಕ್ಷಕಿ ಜಯಶ್ರೀ ಕುಲಕರ್ಣಿ ಮಾತನಾಡಿ, ಮಹಿಳೆಯರ ಕುರಿತು ಗೋಷ್ಠಿಯನ್ನು ನಡೆಸಬೇಕು. 80 ವರ್ಷ ಮೀರಿದ ಸಾಧಕ ಮಹಿಳೆಯರನ್ನು ವೇದಿಕೆಯಲ್ಲಿ ಗೌರವಿಸಬೇಕು ಎಂದರು. ನಿವೃತ್ತ ಪ್ರಾಚಾರ್ಯ, ಸಾಹಿತಿ ರಾ.ಶಿ.ವಾಡೆದ, ಕಸಾಪ ಜಿಲ್ಲಾಧ್ಯಕ್ಷ ಹಾಸೀಂಪೀರ ವಾಲೀಕಾರ, ಕಸಾಪ ತಾಲೂಕಾಧ್ಯಕ್ಷ ವೈ.ಸಿ ಮಯೂರ ಮಾತನಾಡಿದರು.
ಶಿಕ್ಷಕಿ ಶೋಭಾ ಚಿಗರಿ, ವಚನ ಗಾಯಕಿ ಶೈನಾಬಿ ಮಸಳಿ, ಎಸ್.ಎಸ್ ಸಾತಿಹಾಳ, ಶಿವಕುಮಾರ ಶಿವಸಿಂಪಿ, ಶಾಂತು ರಾಣಾಗೋಳ, ಸುನಂದಾ ಯಂಪೂರೆ, ಅನಸೂಯಾ ಪಾರಗೊಂಡ, ಪುರುಷೋತ್ತಮ ಕುಲಕರ್ಣಿ, ಶಾಂತಾ ಮೋಸಲಗಿ, ರಾಚು ಕೊಪ್ಪ, ಡಾ .ವೈ. ಡಿ.ನಾಟೀಕಾರ, .ಎನ್. ಎಮ್ ಚಪ್ಪರಬಂದ, ಜಗದೇವಿ ಬಿರಾದಾರ, ಶರಣು ಲಂಗೋಟಿ, ವರ್ಷಾ ಪಾಟೀಲ, ನಾಗೇಶ ತಳವಾರ, ಅಶೋಕ ಬಿರಾದಾರ, ಸಿದ್ದರಾಮ ಬ್ಯಾಕೋಡ, ಬಸವರಾಜ ಅಗಸರ, ಅಮರ ಗಾಯಕವಾಡ, ರಮೇಶ ಬಡದಾಳ ಸೇರಿ ಅನೇಕರಿದ್ದರು. ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಆನಂದ ಶಾಬಾದಿ ನಿರೂಪಿಸಿದರು. ರಾಜಶೇಖರ ಕಂಬಾರ ವಂದಿಸಿದರು.




