ಪ್ರಜಾಸ್ತ್ರ ಸುದ್ದಿ
ಲಖನೌ(Lucknow): ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದಿರುವ ಕೋಟ್ಯಾಂತರ ರೂಪಾಯಿ ಹಣ ದುರುಪಯೋಗ ಪ್ರಕರಣದ ನಡುವೆ ಕಾಂಗ್ರೆಸ್ ನಿಯೋಗ ರಾಮ ಮಂದಿರ ಭೇಟಿಗೆ ಹೊರಟಿತ್ತು. ಆದರೆ, ಉತ್ತರ ಪ್ರದೇಶ ಸರ್ಕಾರ ಪೊಲೀಸರ ಮೂಲಕ ಅವರನ್ನು ಗೃಹಬಂಧನದಲ್ಲಿ ಇರಿಸಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ನಿಯೋಗದಲ್ಲಿರುವ ಉತ್ತರ ಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಜಯ್ ರಾಯ್, ಪ್ರತಾಪಗಢ ಕಾಂಗ್ರೆಸ್ ಘಟಕದ ಅಧ್ಯಕ್ಷ ನೀರಜ್ ತ್ರಿಪಾಠಿ ಅವರನ್ನು ಗೃಹ ಬಂಧನದಲ್ಲಿ ಇರಿಸಿದೆ. ಅಜಯ್ ರಾಯ್ ತಂಗಿದ್ದ ಹೋಟೆಲ್ ಗೆ ಬಂದ ಪೊಲೀಸರು ಅವರನ್ನು ಗೃಹಬಂಧನದಲ್ಲಿರಿಸಿದೆ. ಉತ್ತರ ಪ್ರದೇಶದ ಬಿಜೆಪಿ ಸರ್ಕಾರವು ಇಂತಹ ಹೇಡಿ ತಂತ್ರಗಳ ಮೊರೆ ಹೋಗಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಿಯೋಗದಲ್ಲಿ ಅಜಯ್ ರಾಯ್, ಅಮೇಠಿ ಸಂಸದ ಕಿಶೋರಿ ಲಾಲ್ ಶರ್ಮಾ, ಸೀತಾಪುರದ ರಾಕೇಶ್ ರಾಥೋಡ್, ಪ್ರಯಾಗರಾಜನ ಉಜ್ವಲ್ ರಮಣ್ ಸಿಂಗ್, ಬಾರಾಬಂಕಿಯ ತನುಜ್ ಪುನಿಯಾ ಅವರಿದ್ದು, ಬುಧವಾರ ರಾಮ ಮಂದಿರ ಭೇಟಿಗೆ ಸಜ್ಜಾಗಿದ್ದರು. ಕೂಡಲೇ ಕಾಂಗ್ರೆಸ್ ನಾಯಕರನ್ನು ಬಿಡುಗಡೆಗೊಳಿಸಿ ರಾಮ ಮಂದಿರ ಭೇಟಿಗೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಇನ್ನು ಕಾಂಗ್ರೆಸ್ ಕಾರ್ಯಕರ್ತರು ಉತ್ತರ ಪ್ರದೇಶದ ಈ ಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ.



