ಪ್ರಜಾಸ್ತ್ರ ಸುದ್ದಿ
ಭುವನೇಶ್ವರ(Bhuvaneshwar): ದಿನದಿಂದ ದಿನಕ್ಕೆ ಸೂರ್ಯನ ತಾಪ ಏರಿಕೆಯಾಗುತ್ತಿದೆ. ಜನಗಣತಿಯಲ್ಲಿ ಭಾಗವಹಿಸಿರುವ ಇಬ್ಬರು ಶಿಕ್ಷಕರು ಬಿಸಿಲಿನ ತಾಪಕ್ಕೆ ಮೃತಪಟ್ಟಿರುವ ಘಟನೆ ಓಡಿಶಾದಲ್ಲಿ ನಡೆದಿದೆ. ಮಯೂರಗಂಜ್ ಹಾಗೂ ಸುಂದರಘರ್ ಜಿಲ್ಲೆಗಳಲ್ಲಿ ಇಬ್ಬರು ಶಿಕ್ಷಕರು ಮೃತಪಟ್ಟಿರುವ ಘಟನೆ ನಡೆದಿದೆ.
ಈ ಎರಡೂ ಜಿಲ್ಲೆಗಳಲ್ಲಿ ಉಷ್ಣಾಂಶ ಶೇಕಡ 37 ಡಿಗ್ರಿ ಸೆಲ್ಸಿಯಸ್ ಇದೆ. ಜನಗಣತಿಯಲ್ಲಿ ತೊಡಗಿದ್ದ ಶಿಕ್ಷಕರು ತೀವ್ರ ಬಳಲಿದ್ದರು. ಹೀಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಸುಂದರಘರ್ ಜಿಲ್ಲೆಯ ಗುರುಂಡಿಯಾ ಬ್ಲಾಕ್ ನ ಜರ್ದಾ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಅನುರಾಗ್ ಎಕ್ಕಾ ಹಾಗೂ ಮಯೂಗಂಜ್ ಜಿಲ್ಲೆಯ ಬೆಟ್ ನೋಟಿ ಬ್ಲಾಕ್ ನ ವೈದ್ಯನಾಥ ಪ್ರೌಢಶಾಲೆಯ ರಾಜಕುಮಾರ್ ಹೆಂಬ್ರಾಮ್ ಮೃತ ಶಿಕ್ಷಕರು ಎಂದು ತಿಳಿದು ಬಂದಿದೆ. ತಾಪಮಾನ ಹೆಚ್ಚಳದಿಂದ ಒಂದು ವಾರದಲ್ಲಿ 3 ಜನರು ಮೃತಪಟ್ಟಂತಾಗಿದೆ.




