ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ ಕೆಲ ದಿನಗಳಲ್ಲಿ ಇದೀಗ 36 ವರ್ಷದ ವಿರಾಟ್ ಕೊಹ್ಲಿ ಸಹ ಟೆಸ್ಟ್ ಕ್ರಿಕಟಿಗೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ 14 ವರ್ಷಗಳ ಟೆಸ್ಟ್ ಆಟಕ್ಕೆ ವಿದಾಯ ಹೇಳಿದ್ದಾರೆ. ಅಲ್ಲಿಗೆ ಇಬ್ಬರು ದಿಗ್ಗಜ ಆಟಗಾರರು ಟೆಸ್ಟ್ ಆಟದಿಂದ ದೂರವಾಗಿದ್ದಾರೆ. ತಮ್ಮ ಇನ್ಸ್ಟಾದಲ್ಲಿ ಈ ಬಗ್ಗೆ ಕೊಹ್ಲಿ ಪೋಸ್ಟ್ ಮಾಡಿದ್ದಾರೆ.
ನನ್ನ ಈ ಪಯಣವನ್ನು ಯಾವತ್ತೂ ಮರೆಯಲ್ಲ. ಇಲ್ಲಿ ಸಾಕಷ್ಟು ಪಾಠಗಳನ್ನು ಕಲಿತಿದ್ದೇನೆ. ಈ ಬಗ್ಗೆ ನನಗೂ ತುಂಬಾ ನೋವಿದೆ. ನಿಮ್ಮೊಂದಿಗೆ ಯಾವತ್ತಿಗೂ ಇರುತ್ತೇನೆ. ಈ ನಿರ್ಧಾರ ಅಷ್ಟೊಂದು ಸರಳವಲ್ಲ. ಆದರೆ, ಇದು ಸರಿಯಾದ ಸಮಯ. ನನ್ನ ನಿರೀಕ್ಷೆಗಿಂತ ಹೆಚ್ಚಿನದನ್ನು ನೀಡಿದೆ. ನಾನು ಹೃದಯಪೂರ್ವ ಕೃತಜ್ಞತೆಗಳನ್ನು ತೆಗೆದುಕೊಂಡು ಹೋಗುತ್ತಿದ್ದೇನೆ. ನಾನು ಯಾವಾಗಲೂ ನನ್ನ ಟೆಸ್ಟ್ ಜೀವನವನ್ನು ನಗುತ್ತಾ ತಿರುಗಿ ನೋಡುತ್ತೇನೆ. 269 ಸೈನ್ ಆಫ್ ಎಂದು ಪೋಸ್ಟ್ ಮಾಡಿದ್ದಾರೆ.
ವೆಸ್ಟ್ ಇಂಡಿಸ್ ವಿರುದ್ಧ ಜೂನ್ 20, 2011ರಂದು ಆಡುವ ಮೂಲಕ ಟೆಸ್ಟ್ ಕರಿಯರ್ ಶುರು ಮಾಡಿದರು. ಇಲ್ಲಿಯವರೆಗೂ 269 ಇನ್ನಿಂಗ್ಸ್ ಆಡಿದ್ದು, 30 ಶತಕ, 31 ಅರ್ಧ ಶತಕ ಗಳಿಸಿದ್ದಾರೆ. 9,230 ರನ್ ಗಳಿಸಿದ್ದು, ಹಲವು ದಾಖಲೆಗಳನ್ನು ಮಾಡಿದ್ದಾರೆ. ಜನವರಿ 3, 2025 ಆಸ್ಟ್ರೇಲಿಯಾ ವಿರುದ್ಧ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿ ಕೊನೆಯ ಟೂರ್ನಿಯಾಗಿದೆ. ರನ್ ಮಷಿನ್ ಎನ್ನುವ ಖ್ಯಾತಿ ಗಳಿಸಿರುವ ಕೊಹ್ಲಿ ಇನ್ಮುಂದೆ ಕೆಂಪು ಬಣ್ಣದ ಚಂಡಿನ ಆಟದಲ್ಲಿ ಕಾಣಿಸಿಕೊಳ್ಳಲ್ಲ ಅನ್ನೋದು ಅಭಿಮಾನಿಗಳಿಗೆ ನೋವಾಗಿದೆ.