ಪ್ರಜಾಸ್ತ್ರ ಸುದ್ದಿ
ಧರ್ಮಶಾಲ(dharamshala): ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಸೋಮವಾರ ಸಂಜೆ ನಡೆದ ಪಂಜಾಬ್ ಹಾಗೂ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ 3 ವಿಕೆಟ್ ಗಳ ಅಂತರದಿಂದ ಜಯ ಸಾಧಿಸಿದೆ. ಈ ಮೂಲಕ ಪ್ಲೇ ಆಫ್ ಕನಸು ಜೀವಂತವಾಗಿಟ್ಟುಕೊಂಡಿದೆ. ಪಂಜಾಬ್ ನೀಡಿದ 211 ರನ್ ಗಳ ಗುರಿಯನ್ನು 19 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 216 ರನ್ ಗಳಿಸುವ ಮೂಲಕ ವಿಜಯ ಸಾಧಿಸಿತು.
ಕೆ.ಎಲ್ ರಾಹುಲ್ 9, ಅಭಿಷೇಕ್ ಪೆರೆಲ್ 5, ಸಾಹಿ ಪ್ರಕಾಶ್ 13, ಸ್ಟಬ್ಸ್ 12 ರನ್ ಗಳಿಸಿ ಫೇಲ್ ಆದರು. 74 ರನ್ ಗಳಿಸುವಷ್ಟರಲ್ಲಿಯೇ 4 ವಿಕೆಟ್ ಕಳೆದುಕೊಂಡ ಡೆಲ್ಲಿ ತಂಡಕ್ಕೆ ನಾಯಕ ಅಕ್ಷರ್ ಪಟೇಲ್ 56, ಡೇವಿಡ್ ಮಿಲ್ಲರ್ 51 ರನ್ ಗಳ ಆಟ ಶಕ್ತಿ ತುಂಬಿತು. ಅಶುತೋಷ್ ಶರ್ಮಾ 24, ಮಾಧವ್ ತಿವಾರಿ ಅಜೇಯ 18, ಅಕೀಬ್ ನಬಿ ಅಜೇಯ 10 ರನ್ ಗಳಿಸುವುದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ನಗೆ ಬೀರಿತು. ಬೌಲಿಂಗ್ ನಲ್ಲಿ 2 ವಿಕೆಟ್, ಬ್ಯಾಟಿಂಗ್ ನಲ್ಲಿ 18 ರನ್ ಗಳಿಸಿದ ತಿವಾರಿ ಪ್ಲೇಯರ್ ಆಫ್ ದಿ ಮ್ಯಾಚ್ ಆದರು.
ಟಾಸ್ ಗೆದ್ದ ಡೆಲ್ಲಿ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಪಡೆ ಮೊದಲು ಬ್ಯಾಟ್ ಮಾಡಿತು. ಪ್ರಿಯಾಣೀಶ್ ಆರ್ಯ 56, ನಾಯಕ ಶ್ರೇಯಸ್ 59, ಕೂಪರ್ 38, ಸೂರ್ಯಾಂಶ್ 21 ರನ್ ಗಳಿಂದಾಗಿ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿತು. ಆದರೆ, ಈ ಬಾರಿಯೂ ಗೆಲುವು ಪಂಜಾಬ್ ಪರ ಇರಲಿಲ್ಲ. ಹೀಗಾಗಿ ಸೋಲು ಅನುಭವಿಸಿ ಸತತ 4 ಪಂದ್ಯಗಳಲ್ಲಿ ಪರಾಭವಗೊಂಡಿತು. ಆರಂಭದಲ್ಲಿ ಒಂದೂ ಸೋಲು ಕಾಣದೆ ಸತತ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಒಂದು ಪಂದ್ಯ ರದ್ದಾದ ಪರಿಣಾಮ ಪಾಯಿಂಟ್ ಟೇಬಲ್ ನಲ್ಲಿ ಟಾಪ್ ನಲ್ಲಿದ್ದ ಪಂಜಾಬ್ ಈಗ 4ನೇ ಸ್ಥಾನದಲ್ಲಿದೆ.
ಆರ್ ಸಿಬಿ 11 ಪಂದ್ಯಗಳಲ್ಲಿ 7ರಲ್ಲಿ ಜಯ ಸಾಧಿಸಿ 14 ಪಾಯಿಂಟ್ ಹಾಗೂ ಉತ್ತಮ ರನ್ ರೇಟ್ ನೊಂದಿಗೆ ಟಾಪ್ 1ಕ್ಕೆ ಬಂದಿದೆ. ಹೈದ್ರಾಬಾದ್ 14 ಪಾಯಿಂಟ್ ನೊಂದಿಗೆ 2ನೇ ಸ್ಥಾನ, 14 ಪಾಯಿಂಟ್ ನೊಂದಿಗೆ ಗುಜರಾತ್ 3ನೇ ಸ್ಥಾನದಲ್ಲಿದೆ. ಲಖೌನ್, ಕೊಲ್ಕತ್ತಾ, ಮುಂಬೈ ತಂಡಗಳು ಪ್ಲೇ ಆಫ್ ನಿಂದ ಬಹುತೇಕ ಹೊರ ಬಿದ್ದಿವೆ. ಸಿಎಸ್ಕೆ, ಆರ್ ಆರ್ 12 ಪಾಯಿಂಟ್ ಗಳೊಂದಿಗೆ 5 ಹಾಗೂ 6ನೇ ಸ್ಥಾನದಲ್ಲಿವೆ. ಇವುಗಳಲ್ಲಿ ಯಾರಿಗೆ ಪ್ಲೇ ಆಫ್ ಗೆ ಹೋಗುವ ಅವಕಾಶ ಸಿಗುತ್ತೆ ನೋಡಬೇಕು.




