ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ 76ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ತಹಶೀಲ್ದಾರ್ ಪ್ರದೀಪಕುಮರ ಹಿರೇಮಠ ಅವರು ಧ್ವಜಾರೋಹಣ ನೆರವೇರಿಸಿದರು. ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಉಪಾಧ್ಯಕ್ಷ ರಾಜಣ್ಣ ನಾರಾಯಣಕರ ಸೇರಿ ಇತರರು ಸಾಥ್ ನೀಡಿದರು. ಜನವರಿ 26 ರಂದು ಗಣರಾಜ್ಯೋತ್ಸವ ಆಚರಿಸುವ ಹಿನ್ನಲೆ ಇರುವುದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ಜಾರಿಗೆ ತಂದಿರುವ ಕಾರಣ. ನವೆಂಬರ್ 26, 1949ರಂದು ಸಂವಿಧಾನ ಅಂಗೀಕಾರಗೊಂಡಿದ್ದರೂ ಅದು ಜಾರಿಗೆ ಬಂದಿದ್ದು ಜನವರಿ 26, 1950ರಂದು. ಹೀಗಾಗಿ ಅಂದಿನಿಂದ ಗಣರಾಜ್ಯೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ, ಪಟ್ಟಣದಲ್ಲಿ ತಾಲೂಕು ಆಡಳಿತದಿಂದ ಆಚರಿಸಲಾದ 76ನೇ ಗಣರಾಜ್ಯೋತ್ಸವದಲ್ಲಿ ಇದನ್ನೇ ಗಾಳಿಗೆ ತೂರಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಸಂವಿಧಾನಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರಿಗೆ ಗೌರವ ಕೊಡುವುದು ಕಡ್ಡಾಯ. ಆದರೆ, ಮಹನೀಯರ ವೇಷಭೂಷಣದಲ್ಲಿ ಮಹಾತ್ಮ ಗಾಂಧೀಜಿ ಅವರನ್ನೇ ಮರೆಯಲಾಗಿದೆ. ಇನ್ನು ಬಹುಮುಖ್ಯವಾಗಿ ಡಾ.ಬಿ.ಆರ್ ಅಂಬೇಡ್ಕರ್ ಅವರ ವೇಷದಲ್ಲಿದ್ದ ವಿದ್ಯಾರ್ಥಿಯ ಕೈಯಲ್ಲಿ ಇರಬೇಕಾಗಿರುವುದು ಸಂವಿಧಾನದ ಪುಸ್ತಕ. ಆದರೆ, ಇಲ್ಲಿ ಕವಿಯೊಬ್ಬರ ಪುಸ್ತಕವನ್ನು ನೀಡಲಾಗಿದೆ. ಈ ಮೂಲಕ ಗಣರಾಜ್ಯೋತ್ಸವ ಆಚರಣೆಯ ಉದ್ದೇಶ ಏನು ಅನ್ನೋದನ್ನೇ ಸಂಪೂರ್ಣ ಮರೆತು, ಧ್ವಜಾರೋಹಣ ಮಾಡುವುದು, ಒಂದಿಷ್ಟು ಮಾತುಗಳನ್ನು ಹೇಳುವುದು ಎಂದುಕೊಂಡಂತೆ ಮಾಡಲಾಗಿದೆ. ಇದನ್ನು ತಾಲೂಕಿನ ಕನ್ನಡಪರ ಸಂಘಟನೆ ಮುಖಂಡರು, ದಲಿತಪರ ಮುಖಂಡರು, ಸಾಮಾಜಿಕ ಹೋರಾಟಗಾರರು ಖಂಡಿಸಿದ್ದಾರೆ.
‘ಗಣರಾಜ್ಯೋತ್ಸವ ಆಚರಿಸುವುದೇ ಸಂವಿಧಾನ ಜಾರಿಗೆ ಬಂದ ಹಿನ್ನಲೆಯಲ್ಲಿ. ಹೀಗಾಗಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವೇಷದಲ್ಲಿರುವ ವಿದ್ಯಾರ್ಥಿ ಕೈಯಲ್ಲಿ ಸಂವಿಧಾನದ ಪುಸ್ತಕ ಇರಬೇಕು. ಅದನ್ನು ಬಿಟ್ಟು ಬೇರೆ ಪುಸ್ತಕ ನೀಡಿದರೆ ಅವರಿಗೆ ಮಾಡುವ ಅವಮಾನ. ಇನ್ನು ಗಾಂಧಿ ಈ ದೇಶದ ರಾಷ್ಟ್ರಪಿತ. ಅವರ ವಿಚಾರಗಳು ಹಾಗೂ ಸಂವಿಧಾನದ ಆಧಾರದ ಮೇಲೆ ದೇಶ ನಡೆಯುತ್ತಿದೆ. ಮಹನೀಯರ ವೇಷ ಭೂಷಣದಲ್ಲಿ ಗಾಂಧಿಯವರನ್ನು ಮರೆತಿರುವುದು ಖಂಡನೀಯ. ಇದಕ್ಕೆ ತಾಲೂಕು ಆಡಳಿತವೇ ಹೊಣೆ’. – ಸಂತೋಷ್ ಮಣಿಗಿರಿ, ಉತ್ತರ ವಲಯ ಅಧ್ಯಕ್ಷರು, ಕರ್ನಾಟಕ ರಣಧೀರ ಪಡೆ
ಇನ್ನು ಈ ಬಗ್ಗೆ ತಹಶೀಲ್ದಾರ್ ಪ್ರದೀಪಕುಮಾರ್ ಹಿರೇಮಠ ಅವರನ್ನು ಕೇಳಿದರೆ, ಬಿಇಓ ಅವರಿಗೆ ಇದರ ಜವಾಬ್ದಾರಿ ಕೊಟ್ಟಿದ್ದೇವು. ನೀವು ಅವರನ್ನೇ ಕೇಳಿ ಎಂದು ಜಾರಿಕೊಂಡರು. ಈ ಮೂಲಕ ತಾಲೂಕು ಆಡಳಿತದ ವತಿಯಿಂದ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಆದ ಪ್ರಮಾದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಕೇಳಿ. ಇದಕ್ಕೂ ನನಗೂ ಸಂಬಂಧವಿಲ್ಲ ಎನ್ನುವ ಧೋರಣೆಯ ಉತ್ತರವನ್ನು ತಾಲೂಕು ದಂಡಾಧಿಕಾರಿಗಳು ನೀಡಿದ್ದಾರೆ.
‘ಸಂವಿಧಾನ ಜಾರಿಗೆ ಬಂದ ನೆನಪಿಗಾಗಿ ಜನವರಿ 26ರಂದು ಗಣರಾಜ್ಯೋತ್ಸವ ಆಚರಿಸಲಾಗುತ್ತೆ. ಇಲ್ಲಿ ಸಂವಿಧಾನದ ವಿಚಾರವೇ ಮುಖ್ಯವಾಗಬೇಕು. ಡಾ.ಬಿ.ಆರ್ ಅಂಬೇಡ್ಕರ್ ಅವರ ವೇಷದಲ್ಲಿದ್ದ ವಿದ್ಯಾರ್ಥಿಯ ಕೈಯಲ್ಲಿ ಸಂವಿಧಾನದ ಪುಸ್ತಕವೇ ಇರಬೇಕು. ಇಲ್ಲದಿರುವುದು ಖಂಡನೀಯ. ಇನ್ನು ರಾಷ್ಟ್ರೀಯ ನಾಯಕರ ವೇಷಭೂಷಣದಲ್ಲಿ ಗಾಂಧೀಜಿ ಇಲ್ಲದಿರುವುದು ನಿಜಕ್ಕೂ ಬೇಸರದ ಸಂಗತಿ. ಇದೆಲ್ಲದರ ಹೊಣೆಯನ್ನು ತಾಲೂಕು ಆಡಳಿತ ಹೊತ್ತುಕೊಳ್ಳಬೇಕು’. – ಪ್ರವೀಣ ಹಾಲಹಳ್ಳಿ, ಸಾಮಾಜಿಕ ಹೋರಾಟಗಾರರು
ಗಣರಾಜ್ಯೋತ್ಸವದ ಸಮಿತಿ ಅಧ್ಯಕ್ಷರು ತಹಶೀಲ್ದಾರರು ಆಗಿರುತ್ತಾರೆ. ಉಳಿದ ಇಲಾಖೆಗಳಿಗೆ ವಹಿಸಿದ ಕೆಲಸವನ್ನು ಗಮನಿಸುವುದು, ಅವರು ತಪ್ಪು ಮಾಡದಂತೆ ನೋಡಿಕೊಳ್ಳುವುದು ತಾಲೂಕು ಆಡಳಿತದ ಜವಾಬ್ದಾರಿ ಆಗಿರುತ್ತೆ. ಹೀಗಿದ್ದರೂ ಅಧಿಕಾರಿಗಳು, ಸಿಬ್ಬಂದಿ ಯಡವಿದ್ದು ಎಲ್ಲಿ ಎನ್ನುವ ಪ್ರಶ್ನೆ ಮೂಡಿದೆ. ಇನ್ನು ಪೂರ್ವಭಾವಿ ಸಭೆಯಲ್ಲಿ ಅಲ್ಪ ಉಪಹಾರಕ್ಕಾಗಿ ಪ್ರತ್ಯೇಕವಾಗಿ ಕೌಂಟರ್ ವ್ಯವಸ್ಥೆ ಮಾಡುವುದಾಗಿ ಹೇಳಿ ಅದನ್ನು ಕೈ ಬಿಡಲಾಗಿದೆ. ಮಾಧ್ಯಮದವರಿಗೆ ಸರಿಯಾದ ಆಸನದ ವ್ಯವಸ್ಥೆ ಇಲ್ಲದೆ ನಿಂತುಕೊಂಡು ವರದಿ ಮಾಡುವ ಹಂತಕ್ಕೆ ಬಂದಿದ್ದು ನಿಜಕ್ಕೂ ದುರಂತ. ಈ ಬಗ್ಗೆ ತಾಲೂಕು ಆಡಳಿತ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ.