ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಚಿನ್ನದ ವ್ಯಾಪಾರಿಯ ಮನೆಯಲ್ಲಿ 18 ಕೆಜಿ ಚಿನ್ನ(Gold Theft) ಹಾಗೂ 40 ಲಕ್ಷ ರೂಪಾಯಿ ಕಳ್ಳತನವಾಗಿದೆ. ಸೆಕ್ಯೂರಿಟಿ ಗಾರ್ಡ್ ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಸುರೇಂದ್ರ ಕುಮಾರ್ ಜೈನ್ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ. ನೇಪಾಳ ಮೂಲದ ಸೆಕ್ಯೂರಿಟಿ ಗಾರ್ಡ್ ನಮ್ರಾಜ್ ವಿರುದ್ಧ ದೂರು ನೀಡಲಾಗಿದೆ.
ಸುರೇಂದ್ರ ಕುಟುಂಬಕ್ಕೆ ಸೇರಿದ 2.8 ಕೆಜಿ, ಐವರು ಸಹೋದರಿಯರ 2.7 ಕೆಜಿ ಹಾಗೂ ವ್ಯಾಪಾರದ 12.8 ಕೆಜಿ ಚಿನ್ನಾಭರಣ ಹಾಗೂ 37.8 ಲಕ್ಷ ವ್ಯಾಪಾರದ ಹಣ ಮತ್ತು 3 ಲಕ್ಷ ರೂಪಾಯಿ ವೈಯಕ್ತಿಕ ಹಣ ಕಳ್ಳತನವಾಗಿದೆ. ಈ ಮೂಲಕ 18 ಕೆಜಿ 437 ಗ್ರಾಂ ಚಿನ್ನಾಭರಣ, 40.80 ಲಕ್ಷ ರೂಪಾಯಿ ಸೇರಿದಂತೆ ಅಂದಾಜು ಮೌಲ್ಯ 15.15 ಕೋಟಿ ರೂಪಾಯಿ ಆಗಿದೆ. ನವೆಂಬರ್ 1ರ ಸಂಜೆ ಸುರೇಂದ್ರ ಕುಮಾರ್ ಜೈನ್ ಕುಟುಂಬ ಸಮೇತ ಗುಜರಾತಿಗೆ ಹೋಗಿದ್ದಾರೆ. ನವೆಂಬರ್ 7ರಂದು ವಾಪಸ್ ಬೆಂಗಳೂರಿಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಸೆಕ್ಯೂರಿಟಿ ಗಾರ್ಡ್ ನಮ್ರಾಜ್ ಗೆ ಕಾಲ್ ಮಾಡಿದರೆ ಸ್ವಿಚ್ಛ್ ಆಫ್ ಬರ್ತಿದೆಯಂತೆ. ಆತನ ವಿರುದ್ಧ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.