ಪ್ರಜಾಸ್ತ್ರ ಸುದ್ದಿ
ಕಲಬುರಗಿ(Kalaburagi): ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆದ್ದ ಪಕ್ಷಕ್ಕೆ ಸರ್ಕಾರ ರಚನೆ ಮಾಡಲು ಆಹ್ವಾನ ನೀಡಬೇಕಾಗಿರುವುದು ರಾಜ್ಯಪಾಲರ ಕರ್ತವ್ಯ. ಆದರೆ, ಉದ್ದೇಶಪೂರ್ವಕವಾಗಿ ತಮಿಳುನಾಡಿನಲ್ಲಿ ಟಿವಿಕೆಯ ವಿಜಯ ಜೋಸೆಫ್ ಅವರಿಗೆ ಬಹುಮತ ಸಾಬೀತು ಪಡಿಸುವಂತೆ ವಾಪಸ್ ಕಳಿಸಿದ್ದಾರೆ. ಬಹುಮತ ಇಲ್ಲದಿದ್ದರೂ ರಾಜ್ಯದಲ್ಲಿ ಬಿ.ಎಸ್ ಯಡಿಯೂರಪ್ಪ, ಮಹಾರಾಷ್ಟ್ರದಲ್ಲಿ ಫಡ್ನಾವೀಸ್ ಅವರಿಗೆ ಅವಕಾಶ ಕೊಟ್ಟಿದ್ದು ಯಾಕೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯೇತರ ಪಕ್ಷಗಳು ಸರ್ಕಾರ ರಚನೆ ಮಾಡದಂತೆ ಕೇಂದ್ರ ಸರ್ಕಾರ ರಾಜ್ಯಪಾಲರನ್ನು ಬಳಸಿಕೊಳ್ಳುತ್ತಿದೆ. ರಾಜ್ಯಪಾಲರ ಕಚೇರಿಗಳಾದ ಲೋಕಭವನಗಳು ಬಿಜೆಪಿ, ಆರ್ ಎಸ್ಎಸ್ ಕಚೇರಿಗಳಾಗಿವೆ. ಬಹುಮತ ಸಾಬೀತು ಪಡಿಸಬೇಕಾಗಿರುವುದು ಸದನದಲ್ಲಿ. ರಾಜ್ಯಪಾಲರ ಮನೆಯಲ್ಲಿ ಅಲ್ಲ. ಇಷ್ಟೊಂದು ಸರಳ ಸತ್ಯ ರಾಜ್ಯಪಾಲರಿಗೆ ಗೊತ್ತಿಲ್ಲವೆ ಎಂದು ಕಿಡಿ ಕಾರಿದರು.




