ಪ್ರಜಾಸ್ತ್ರ ಸುದ್ದಿ
ಬೀದರ(Bidara): ಬೀದಿ ನಾಯಿಯೊಂದು 5 ತಿಂಗಳ ಹೆಣ್ಣು ಮಗುವಿನ ಮೇಲೆ ದಾಳಿ ಮಾಡಿದ್ದರಿಂದ ಗಂಭೀರ ಗಾಯಗಳಾಗಿದ್ದವು. ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗು ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ. ಶನಿವಾರ ಈ ಒಂದು ಕರುಣಾಜನಕ ಘಟನೆ ನಡೆದಿದೆ. ಹುಮನಾಬಾದ್ ತಾಲೂಕಿನ ದುಬಲಗುಂಡಿ ಗ್ರಾಮದ ಸಿದ್ದಪ್ಪ ಹಾಗೂ ಸುಧಾ ದಂಪತಿಯ 5 ತಿಂಗಳ ಮಗಳು ಮೃತಪಟ್ಟಿದ್ದಾಳೆ.
ಶನಿವಾರ ಮುಂಜಾನೆ ಸುಧಾ ಮಗುವನ್ನು ಪಡಸಾಲೆಯಲ್ಲಿ ಮಲಗಿಸಿ ಕೆಲಸ ಮಾಡುತ್ತಿದ್ದಾಗ ಬೀದಿ ನಾಯಿಯೊಂದು ಏಕಾಏಕಿ ದಾಳಿ ಮಾಡಿದೆ. ಮಗು ಜೋರಾಗಿ ಅಳುವ ಶಬ್ಧ ಕೇಳಿದಾಗ ಮನೆಯೊಳಗಿಂದ ಓಡಿ ಬರುವಷ್ಟರಲ್ಲಿ ನಾಯಿ ಮಗುವಿಗೆ ಎಲ್ಲೆಂದರಲ್ಲಿ ಕಚ್ಚಿದೆ. ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಬೀದರ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿದೆ. ಗ್ರಾಮದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.




