ಪ್ರಜಾಸ್ತ್ರ ಸುದ್ದಿ
ಚೆನ್ನೈ(Chennai): ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಜೋಸೆಫ್ ನೇತೃತ್ವದ ಟಿವಿಕೆ(ತಮಿಳಗ ವೆಟ್ರಿ ಕಳಗಂ) ಪಕ್ಷ 108 ಸ್ಥಾನಗಳನ್ನು ಗೆದ್ದಿದೆ. ಆದರೆ, ಸರ್ಕಾರ ರಚನೆಗೆ ಬೇಕಾದ 118 ಮ್ಯಾಜಿಕ್ ನಂಬರ್ ಬಂದಿಲ್ಲ. ಈ ಕಾರಣಕ್ಕೆ ರಾಜ್ಯಪಾಲರು ಎರಡು ಅವರ ಸರ್ಕಾರ ರಚನೆಗೆ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ಹೀಗಾಗಿ ರಾಜಕೀಯ ಬಿಕ್ಕಟ್ಟು ಎದುರಾಗಿದೆ.
ಟಿವಿಕೆಗೆ 5 ಸ್ಥಾನ ಗೆದ್ದಿರುವ ಕಾಂಗ್ರೆಸ್ ಬೆಂಬಲ ನೀಡಿದೆ. ಅಲ್ಲಿಗೆ 113ಕ್ಕೆ ಸದಸ್ಯರ ಬಲ ಏರಿದೆ. ಸಿಪಿಐ, ಸಿಪಿಐ(ಎಂ), ವಿಸಿಕೆ ಪಕ್ಷಗಳು ಬೆಂಬಲ ನೀಡಿದರೆ ವಿಜಯ ಹಾದಿ ಸುಗಮವಾಗಲಿದೆ. ಈ ಪಕ್ಷಗಳ ಹತ್ತಿರ ಇಬ್ಬಿಬ್ಬರು ಶಾಸಕರಿದ್ದಾರೆ. ಇವರು ತಮ್ಮ ಬೆಂಬಲ ಘೋಷಿಸಿದರೆ 119 ಸ್ಥಾನಗಳು ಆಗಲಿವೆ. ವಿಜಯ ಎರಡು ಕಡೆ ಜಯ ಸಾಧಿಸಿದ್ದು, ಒಂದಕ್ಕೆ ರಾಜೀನಾಮೆ ಕೊಡಬೇಕು. ಆಗ ಮ್ಯಾಜಿಕ್ ನಂಬರ್ ಗೂ ಸಮಸ್ಯೆಯಾಗುವುದಿಲ್ಲ. ಅಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ಟಿವಿಕೆ ಗೆದ್ದರೆ ಮತ್ತಷ್ಟು ಪ್ಲಸ್ ಆಗುತ್ತೆ.
ಈಗಾಗ್ಲೇ ವಿಜಯ ಟೀಂ ಸಣ್ಣ ಪಕ್ಷಗಳನ್ನು ಗುರುವಾರ ಭೇಟಿಯಾಗಿ ಬೆಂಬಲ ಕೋರಿದೆ. ಶುಕ್ರವಾರ ಉನ್ನತ ಮಟ್ಟದ ಸಭೆಗಳನ್ನು ಈ ಪಕ್ಷಗಳು ನಡೆಸಲಿದ್ದು, ನಾಲ್ಕು ಸ್ಥಾನ ಪಡೆದಿರುವ ಪಟ್ಟಾಳಿ ಮಕ್ಕಳ್ ಕಚ್ಚಿ ಸೇರಿ ವಿಸಿಕೆ, ಸಿಪಿಐ, ಸಿಪಿಐ(ಎಂ) ಪಕ್ಷಗಳು ಸಾಥ್ ನೀಡದರೆ ವಿಜಯ ಮುಖ್ಯಮಂತ್ರಿ ಪಟ್ಟಕ್ಕೆ ಏರಲು ಯಾವುದೇ ಸಮಸ್ಯೆ ಇರುವುದಿಲ್ಲ. ರಾಜ್ಯಪಾಲರು ಇಲ್ಲಿ ವಿಜಯಗೆ ಅವಕಾಶ ನೀಡದೆ ಮೊದಲೇ ಬಹುಮತ ಸಾಬೀತು ಪಡಿಸಿ ಎನ್ನುತ್ತಿದ್ದಾರೆ. ಸದನದಲ್ಲಿ ಇದಕ್ಕೆ ಅವಕಾಶ ಇದ್ದರೂ ರಾಜ್ಯಪಾಲರ ಈ ನಡೆ ಟಿವಿಕೆ ನಾಯಕರನ್ನು ಕೆರಳಿಸಿದೆ. ಹೀಗಾಗಿ ರಾಜಕೀಯ ಕಸರತ್ತುಗಳು ನಡೆದಿದ್ದು, ವಿಜಯ ಮುಂದಿನ ಹಾದಿ ಅಷ್ಟೊಂದು ಸುಗಮವಾಗಿಲ್ಲ.




