ಪ್ರಜಾಸ್ತ್ರ ಸುದ್ದಿ
ಚನ್ನಪಟ್ಟಣ(Channapattana): ಇತ್ತೀಚೆಗೆ ಪ್ರೀತಿ, ಪ್ರೇಮ ವಿಚಾರದಲ್ಲಿ ವಿಚಿತ್ರ ಹಾಗೂ ಆತಂಕಕಾರಿ ಘಟನೆಗಳು ನಡೆಯುತ್ತಿವೆ. 15 ವರ್ಷದ ಬಾಲಕ ಹಾಗೂ 26 ವರ್ಷದ ಯುವತಿ ನಡುವೆ ಪ್ರೀತಿ ಮೂಡಿದೆ. ಇದಕ್ಕೆ ಬಾಲಕನ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿ ಬುದ್ದಿವಾದ ಹೇಳಿದ್ದಾರೆ. ಇದರಿಂದ ಮುನಿಸಿಕೊಂಡ ಬಾಲಕ ಮನೆ ಬಿಟ್ಟು ಹೋಗಿ, ಕೊನೆಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚನ್ನಪಟ್ಟಣದ ರಾಜಾ ಕೆಂಪೇಗೌಡ ಬಡಾವಣೆಯಲ್ಲಿ ಇಂತಹದೊಂದು ಘಟನೆ ನಡೆದಿದೆ. ರಾಮನಗರ ತಾಲೂಕಿನ ಬಿಡದಿಯ 15 ವರ್ಷದ ಬಾಲಕ ತನ್ನ ಸ್ನೇಹಿತನ ಮನೆಯಲ್ಲಿ ವಿಷ ಸೇವಿಸಿದ್ದಾನೆ.
ಮನೆಯವರ ವಿರೋಧದ ನಡುವೆಯೂ ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರು ಸಂಪರ್ಕದಲ್ಲಿದ್ದರು. ಇದರಿಂದ ಮನೆಯಲ್ಲಿ ಗಲಾಟೆಯಾಗಿದೆ. ಹೀಗಾಗಿ ಕಳೆದ 25 ದಿನಗಳ ಹಿಂದೆ ಬಾಲಕ ಮನೆ ಬಿಟ್ಟು ಹೋಗಿದ್ದಾನೆ. ಏಪ್ರಿಲ್ 29ರ ಸಂಜೆ ತಾಯಿಗೆ ಫೋನ್ ಮಾಡಿ ತಾನು ಸ್ನೇಹಿತನ ಮನೆಯಲ್ಲಿರುವುದಾಗಿ ಹೇಳಿದ್ದಾನೆ. ನಾನು ಪ್ರೀತಿಸಿದ ಯುವತಿ ಜೊತೆ ಇರಲು ಬಿಡುತ್ತಿಲ್ಲ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿ ವಿಷ ಕುಡಿದಿದ್ದಾನೆ.
ಬಾಲಕನ ಸ್ನೇಹಿತರು ಚನ್ನಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಚಾರ ತಿಳಿದು ಇಲ್ಲಿಗೆ ಬಂದ ಪೋಷಕರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಮೇ 3ರಂದು ಬಾಲಕ ಮೃತಪಟ್ಟಿದ್ದಾನೆ. ತಮ್ಮ ಮಗನ ಸಾವಿಗೆ ಯುವತಿ ಕಾರಣವೆಂದು ಹೇಳಿ ಚನ್ನಪಟ್ಟಣದ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.




