ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಉದ್ಯಮಿ ಗೌತಮ್ ಅದಾನಿ ಬಂಧನಕ್ಕೆ ಅಮೆರಿಕ ಕೋರ್ಟ್ ವಾರೆಂಟ್ ಜಾರಿಗೊಳಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಂಧನ ವಾರೆಂಟ್ ಬಂದರೂ ಇನ್ನೂ ಯಾಕೆ ಬಂಧಿಸುತ್ತಿಲ್ಲ. ಅದಾನಿಯನ್ನು ರಕ್ಷಣೆ ಮಾಡುತ್ತಿರುವವರು ಯಾರೆಂದು ದೇಶಕ್ಕೆ ಗೊತ್ತಿದೆ. ನಿಮಗೆ ಗೊತ್ತಿಲ್ಲವಾ ಎಂದು ಮಾಧ್ಯಮದವರನ್ನು ಮರು ಪ್ರಶ್ನಿಸಿದರು.
ಶುಕ್ರವಾರ ಮೈಸೂರಿನಲ್ಲಿ ಮಾತನಾಡಿದ ಅವರು, ಅದಾನಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವ ಪದೆಪದೆ ಹೋಗುತ್ತಿದೆ ಎನ್ನುವ ಪ್ರಶ್ನೆಗೆ ಈ ರೀತಿಯಾಗಿ ಹೇಳಿದರು. ಯಾರು ರಕ್ಷಣೆ ಮಾಡುತ್ತಿದ್ದಾರೆ ಎಂದು ದೇಶಕ್ಕೆ ಗೊತ್ತಿದೆ. ಸತ್ಯವನ್ನು ಜನರಿಗೆ ಮಾಧ್ಯಮಗಳು ಯಾಕೆ ತೋರಿಸುತ್ತಿಲ್ಲವೆಂದು ಕೇಳಿದರು.
ಇನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿ, ಅಪರಾಧಿ ಹಿನ್ನಲೆಯಿರುವ ಅದಾನಿಯನ್ನು ಮೋದಿ ರಕ್ಷಿಸುತ್ತಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಮೋದಿಯವರ ಅತ್ಯಾಪ್ತ ಗೆಳೆಯ ಅದಾನಿ ಬಂಧನಕ್ಕೆ ಅಮೆರಿಕ ಕೋರ್ಟ್ ಬಂಧನ ವಾರೆಂಟ್ ಹೊರಡಿಸಿದೆ. ಉದ್ಯಮಿ ವಿಸ್ತರಿಸಲು ಅಧಿಕಾರಿಗಳಿಗೆ 2,100 ಕೋಟಿ ರೂಪಾಯಿ ಲಂಚದ ಆಮಿಷ ಹಾಗೂ ಹೂಡಿಕೆದಾರರಿಗೆ ಮೋಸ ಮಾಡಿದ ಆರೋಪವಿದೆ. ಇದರಿಂದ ಅದಾನಿ ವೃತ್ತಿಪರ ಅಪರಾಧಿ ಎಂದು ಮತ್ತೆ ಸಾಬೀತಾಗಿದೆ ಅಂತಾ ವಾಗ್ದಾಳಿ ನಡೆಸಿದ್ದಾರೆ.