ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಕಾರ್ಮಿಕರಿದ್ದಲ್ಲಿ ಆರೋಗ್ಯ ತಪಾಸಣೆಗೆ ಅನುಕೂಲ ಕಲ್ಪಿಸುವ ವಿನೂತನ ಸಂಚಾರಿ ಆರೋಗ್ಯ ವಾಹನಕ್ಕೆ ಬುಧವಾರ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ವಿಜಯಪುರ ಜಿಲ್ಲೆಗೆ 3 ಸಂಚಾರಿ ಆರೋಗ್ಯ ಘಟಕದ ವಾಹನಗಳು ಮಂಜೂರಾಗಿದ್ದು, ಈಗಾಗಲೇ 2 ಸಂಚಾರಿ ಆರೋಗ್ಯ ಘಟಕಗಳಿಗೆ ಚಾಲನೆಯನ್ನು ನೀಡಲಾಗಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಮತ್ತು ಹೋಬಳಿಗಳು, ಗ್ರಾಮಗಳು ಒಳಪಡುವ ರೀತಿಯಲ್ಲಿ ರೂಟ್ ಮ್ಯಾಪ್ ಸಿದ್ದಪಡಿಸಿ ನೀಡಲಾಗಿದೆ. ಕಾರ್ಮಿಕರು ಕೆಲಸ ಮಾಡುವ ಮತ್ತು ವಾಸಿಸುವ ಸ್ಥಳಗಳಿಗೆ ಹೋಗಿ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಗುತ್ತದೆ. ಹೆಚ್ಚಿನ ಸಂಖ್ಯೆಯ ನೋಂದಾಯಿತ ಕಾರ್ಮಿಕರಿಗೆ ಸೌಲಭ್ಯ ಸಿಗುವಂತಹ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡು ಈ ವಾಹನಗಳು ಕಾರ್ಯನಿರ್ವಹಿಸಲಿವೆ ಎಂದು ಹೇಳಿದರು.
ಸದರಿ ಸಂಚಾರಿ ಆರೋಗ್ಯ ಘಟಕದಲ್ಲಿ ಎಂಬಿಬಿಎಸ್ ವೈದ್ಯರು, ಜಿಎನ್ಎಮ್, ಲ್ಯಾಬ್ ಟೆಕ್ನಿಷಿಯನ್ ಒಳಗೊಂಡಂತೆ 6 ಜನ ಸಿಬ್ಬಂದಿ ಕೆಲಸ ನಿರ್ವಹಿಸುತ್ತಾರೆ. ಈ ಸಂಚಾರಿ ಆರೋಗ್ಯ ಘಟಕದಲ್ಲಿ 25 ವೈದ್ಯಕೀಯ ಉಪಕರಣಗಳು, 5 ಪ್ರಯೋಗಾಲಯದ ಉಪಕರಣಗಳು ಹಾಗೂ 37 ವಿವಿಧ ವೈದ್ಯಕೀಯ ಬಳಕೆ ವಸ್ತುಗಳಿರಲಿವೆ. ಈ ಸಂಚಾರಿ ಆರೋಗ್ಯ ಘಟಕದಲ್ಲಿ ರಕ್ತ ಪರೀಕ್ಷೆ, ಬಿಪಿ, ಶುಗರ್, ಹೃದ್ರೋಗ ತಪಾಸಣೆ, ಕಾಮಾಲೆ-ಎ, ಬಿ, ಸಿ, ಮಲೇರಿಯಾ, ಡೆಂಗ್ಯೂ, ಚಿಕನ್ ಗೂನ್ಯಾ, ಲೆಪ್ಟೋಸ್ಪಿರಿಯಾ, ಟೈಫಾಯಿಡ್ ಮತ್ತು ಇತರೆ ಕಾಯಿಲೆಗಳಿಗೆ ಸಂಬಂಧಿಸಿದಂತೆ ರೋಗ ನಿರ್ಣಯ ಪರೀಕ್ಷೆ ಮಾಡಿ, ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಉಮಾಶ್ರೀ ಕೋಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಂಪತ್‌ಕುಮಾರ ಗುಣಾರಿ ಸೇರಿದಂತೆ ಕಾರ್ಮಿಕ ನಿರೀಕ್ಷಕರು, ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.